1931-. ಕನ್ನಡ ಚಲನಚಿತ್ರ ನಿರ್ದೇಶಕ, ಗೀತೆ ಹಾಗೂ ಸಂಭಾಷಣೆಯ ರಚನಕಾರ. ಇವರ ನಿಜವಾದ ಹೆಸರು ಲಕ್ಷ್ಮಣರಾವ್ ಮೋಹಿತೆ. 1931ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ರಾಮರಾವ್ ಮೋಹಿತೆ, ತಾಯಿ ಲಕ್ಷ್ಮೀಬಾಯಿ. ಬೆಂಗಳೂರಿನ ಮಲ್ಲೇಶ್ವರಂ ಪ್ರೌಢಶಾಲೆಯಲ್ಲಿ ಓದಿದ ಇವರಿಗೆ ಕವಿ ಹೊಯಿಸಳರು ಗುರುಗಳಾಗಿದ್ದರು. ಇಂಟರ್ಮೀಡಿಯಟ್ನಲ್ಲಿ ಜಿ.ಪಿ.ರಾಜರತ್ನಂ ಗುರುಗಳಾಗಿ ದೊರೆತರು. ಸಾಹಿತ್ಯ ದಿಗ್ಗಜಗಳ ಪರಿಚಯ ಪ್ರಭಾವಗಳಿಂದಾಗಿ ಸುಪ್ತವಾಗಿದ್ದ ಇವರ ಸಾಹಿತ್ಯ ರಚನಾಶಕ್ತಿಗೆ ಇಂಬು ದೊರೆಯಿತು. ಇವರು ಪ್ರೌಢಶಾಲೆಯ ದಿನಗಳಲ್ಲೇ ಪದ್ಯ, ನಾಟಕಗಳನ್ನು ಬರೆಯಲಾರಂಭಿಸಿದರು. ಇವರ ರಚನೆಗಳು ಅಂದಿನ ತಾಯಿನಾಡು ಪತ್ರಿಕೆಯಲ್ಲಿ ಬೆಳಕು ಕಂಡವು. ಶಾಲಾದಿನಗಳಲ್ಲಿಯೇ ಉರ್ದು ಶಾಯರಿಗಳು ಇವರನ್ನು ವಿಶೇಷವಾಗಿ ಆಕರ್ಷಿಸಿದವು. ನಾಟಕದತ್ತ ಒಲವು ಬೆಳೆದು ಹವ್ಯಾಸಿ ಕಲಾವಿದರ ಒಡನಾಟ ಒದಗಿ ಬಂತು. ಆ ವೇಳೆಯಲ್ಲಿ ಇವರು ಬರೆದ ಮದ್ವೆ ಮಾರ್ಕೆಟ್ ನಾಟಕ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿತು. ತಾವೇ ನಾಟಕಗಳಲ್ಲಿ ಕೂಡ ಅಭಿನಯಿಸಿದರು. ಹೆಸರಾಂತ ಬಿ.ಆರ್.ಕೃಷ್ಣಮೂರ್ತಿಯವರು ಶ್ರೀರಾಮಪೂಜಾ ಚಿತ್ರಕ್ಕೆ ಗೀತರಚನಾಕಾರರಾಗಿ ಇವರನ್ನು ನಿಯೋಜಿಸಿದರು. ಮೋಹಿತೆಯವರಿಗೆ ಗೀತಪ್ರಿಯ ಎಂಬ ಕಾವ್ಯನಾಮ ಇಟ್ಟವರು ಸಂಗೀತ ಸಂಯೋಜಕ ವಿಜಯಭಾಸ್ಕರ್. ಹೀಗೆ ಗೀತಪ್ರಿಯರಾಗಿ ಇವರು ಚಿತ್ರಗಳಿಗೆ ಗೀತರಚನೆಯ ಜವಾಬ್ದಾರಿ ಹೊತ್ತರು. ಭಾಗ್ಯ ಚಕ್ರ (1956) ಎಂಬುದು ಇವರು ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದ ಮೊದಲ ಚಿತ್ರ. ಇವರಲ್ಲಿ ಅಡಗಿದ್ದ ನಿರ್ದೇಶಕನನ್ನು ಗುರುತಿಸಿದವರು ಕರ್ನಾಟಕ ಪಿsಲಂಸ್ ಸಂಸ್ಥೆಯಲ್ಲಿದ್ದ ಎಂ.ವಿ. ವೆಂಕಟಾಚಲಂ. ಅವರು ತಮ್ಮ ಮಣ್ಣಿನ ಮಗ ಚಿತ್ರದ ನಿರ್ದೇಶನದ ಹೊಣೆಗಾರಿಕೆಯನ್ನು ಇವರಿಗೆ ವಹಿಸಿದರು (1968). ಬೆಂಗಳೂರಿನ ಕಪಾಲಿ ಚಿತ್ರ ಮಂದಿರದಲ್ಲಿ ಶತದಿನೋತ್ಸವ ಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಯಿತು. ಎಂ.ಪಿ. ಶಂಕರರ ಕಾಡಿನ ರಹಸ್ಯ (1969) ಇವರು ನಿರ್ದೇಶಿಸಿದ ಎರಡನೆಯ ಚಿತ್ರ. ಅದೇ ವರ್ಷ ಮದುವೆ, ಮದುವೆ, ಮದುವೆ, ಎಂಬ ಹಾಸ್ಯ ಚಿತ್ರವನ್ನೂ ಇವರು ನಿರ್ದೇಶಿಸಿ ದರು. ಇವರು ನಿರ್ದೇಶಿಸಿದ ಬಹುತೇಕ ಚಿತ್ರಗಳ ಸಾಹಿತ್ಯವನ್ನು ರಚಿಸಿದವರು ಇವರೇ. ಹಿಂದಿ, ಮರಾಠಿ, ಉರ್ದು, ಕನ್ನಡ ಭಾಷೆಗಳಲ್ಲಿ ಇವರಿಗಿರುವ ಪರಿಣತಿಯಿಂದಾಗಿ ಕವಿಯಾಗಿ, ಸಾಹಿತಿಯಾಗಿ ತಮ್ಮ ಕಲ್ಪನೆಗಳಿಗೆ ಈ ಚಲನಚಿತ್ರಗಳು ಒಂದು ಯಶಸ್ವಿ ಮಜಲಾಗಿ ಪರಿಣಮಿಸಿದುವು. ಪುಟಾಣಿ ಏಜೆಂಟ್ 1 2 3, ಪ್ರಚಂಡ ಪುಟಾಣಿಗಳು ಇವರ ನಿರ್ದೇಶನದಲ್ಲಿ ಮೂಡಿಬಂದ ಮಕ್ಕಳ ಚಿತ್ರಗಳು. ಪುಟಾಣಿ ಏಜೆಂಟ್ 1 2 3 ಇವರದೇ ನಿರ್ದೇಶನದಲ್ಲಿ ಅನ್ಮೋಲ್ ಸಿತಾರೆ ಎಂಬ ಹೆಸರಿನಲ್ಲಿ ಹಿಂದಿ ಚಲನಚಿತ್ರವಾಗಿ ಪುನರ್ನಿರ್ಮಾಣ ಗೊಂಡಿದೆ. ಇವಲ್ಲದೆ ಕನ್ನಡ ಕಾದಂಬರಿಗಳನ್ನು ಆಧರಿಸಿ ಅನೇಕ ಚಲನಚಿತ್ರಗಳನ್ನು ಇವರು ನಿರ್ದೇಶಿಸಿದ್ದಾರೆ. ಯಾವ ಜನ್ಮದ ಮೈತ್ರಿ, ಬೆಸುಗೆ, ಬೆಳುವಲದ ಮಡಿಲಲ್ಲಿ, ಹೊಂಬಿಸಿಲು, ಸುವರ್ಣಸೇತುವೆ ಅವುಗಳಲ್ಲಿ ಮುಖ್ಯವಾದವು.

ಭಾರತೀಯ ಸಂಸ್ಕೃತಿ, ಪರಂಪರೆ, ಶ್ರಮ ಜೀವಿಗಳು, ಮಣ್ಣಿನ ಮಕ್ಕಳ ಬಗೆಗೆ ಅಪಾರ ಕಾಳಜಿ ಸೈನಿಕ ಕುಟುಂಬದಿಂದ ಬಂದ ಕಾರಣ, ಜೈ ಜವಾನ್, ಜೈ ಕಿಸಾನ್ ಕಲ್ಪನೆಗೆ ಒತ್ತು ಕೊಡುವುದು ಇವರ ಚಿತ್ರಗಳಲ್ಲಿನ ವಿಶೇಷ. ಇವರ ಚಿತ್ರಗಳಲ್ಲಿ ನಾಯಕ ಭಾರತೀಯ ಮೌಲ್ಯಗಳ ಪ್ರತಿಪಾದಕ, ಹಿಂಸೆಯಿಂದ ದೂರ, ನ್ಯಾಯಪರ, ನಾಯಕಿಯೂ ಆದರ್ಶನಾರಿ. ಇವರು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಉತ್ತಮ ಮೌಲ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. 

ಇವರಿಗೆ ಅನೇಕ ಗೌರವ, ಪ್ರಶಸ್ತಿ, ಸನ್ಮಾನಗಳು ದೊರೆತಿವೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ(1992-93),ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕೆ.ಸಿ.ಎನ್.ಪ್ರಶಸ್ತಿ (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1992), ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ  (1996-97) -ಇವು ಕೆಲವು ಮುಖ್ಯ ಪ್ರಶಸ್ತಿಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ